ಬಜೆ -
	ಏರೇಸೀ ಕುಟುಂಬಕ್ಕೆ ಸೇರಿದ ಸುವಾಸನಾಯುಕ್ತ ಔಷಧೀಯ ಸಸ್ಯ (ಸ್ವೀಟ್ ಫ್ಲ್ಯಾಗ್). ಆಕರಸ್ ಕ್ಯಾಲಮಸ್ ಇದರ ವೈಜ್ಞಾನಿಕ ಹೆಸರು. ಇದು ಮುಖ್ಯವಾಗಿ ಏಷ್ಯದ ಆಗ್ನೇಯ ಭಾಗದಲ್ಲಿ ವಿಫುಲವಾಗಿ ಬೆಳೆಯುತ್ತದೆ. ಇದನ್ನು ಭಾರತ ಮತ್ತು ಶ್ರೀಲಂಕದಲ್ಲಿ ಸಾಮಾನ್ಯವಾಗಿ ಬೆಳೆಸುತ್ತಾರೆ. ಶಿಥಿಲವಾದ ಜವುಗು ಮಣ್ಣು, ಯಥೇಚ್ಚ ನೀರು ಹಾಗೂ ಗೊಬ್ಬರವೊದಗಿಸಿದರೆ ಬೆಳೆ ಹುಲುಸಾಗಿರುತ್ತದೆ. ಇದು ಸ್ವಭಾವತಃ ಬಹುವಾರ್ಷಿಕ ಸಸ್ಯವಾದರೂ ಕೃಷಿಯಲ್ಲಿ ಏಕವಾರ್ಷಿಕವಾಗಿದ್ದು ಒಂದೇ ವರ್ಷದಲ್ಲಿ ಕಟಾವಿಗೆ ಬರುತ್ತದೆ.

	ಸುಮಾರು 60 ಸೆಂ.ಮೀ. ಗಿಂತ ಹೆಚ್ಚು ಎತ್ತರಕ್ಕೆ ಬೆಳೆಯುವ ಇದರ ಕಾಂಡಗಳು ಭೂಗತವಾಗಿದ್ದು, ಬಹುಶಾಖಾಯುತವಾಗಿವೆ. ಇವುಗಳ ಹೊರಭಾಗ ಕೊಳವೆ ಆಕಾರದಲ್ಲಿದೆ. ಒಳಭಾಗ ಸ್ಪಂಜಿನಂತಿದೆ. ಹೊರಭಾಗದ ಬಣ್ಣ ನಸುಕಂದು, ಒಳಭಾಗದ್ದು ಬಿಳಿ. ಕಾಂಡದ ಉದ್ದಕ್ಕೂ ಸರಳ ರೀತಿಯ ಎಲೆಗಳು ಎರಡು ಸಾಲುಗಳಲ್ಲಿ ದಟ್ಟವಾಗಿ ಜೋಡಣೆಗೊಂಡಿವೆ. ಎಲೆಗಳು ಖಡ್ಗದಂತಿವೆ. ಎಲೆಯ ಉದ್ದ 1-1.3 ಮೀ, ಅಗಲ 2.5 ಸೆಂ.ಮೀ. ತೊಟ್ಟು ಮತ್ತು ಅಲಗು ಎಂಬ ವ್ಯತ್ಯಾಸವಿಲ್ಲ. ಅಲಗುಭಾಗದ ನರವಿನ್ಯಾಸ ಸೂಕ್ಷ್ಮವಾಗಿ ಸಮಾಂತರವಾಗಿದೆ. ಪುಷ್ಪವೃಂತ ಒಂದು ಪಾಶ್ರ್ವದಿಂದ ಮೂಡಿರುವಂತೆ ಇದೆ. ಸಾಧಾರಣವಾಗಿ ಬೇಸಿಗೆಯ ಆರಂಭ ಹೂಬಿಡುವ ಶ್ರಾಯ. ಹೂಗಳು ದ್ವಿಲಿಂಗಗಳು; ಸ್ವೇಡಿಕ್ಸ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪ್ರತಿ ಹೂವಿನಲ್ಲೂ ಹೆಡೆಯಾಕಾರದ 6 ಪುಷ್ಟಪತ್ರಗಳು 6 ಕೇಸರಗಳು 2-4 ಕಾರ್ಪೆಲುಗಳ ಅಂಡಾಶಯಗಳಿವೆ.

	ಕಾಂಡ ಸುಗಂಧಪೂರಿತ ಮಾತ್ರವಲ್ಲ ಖಾರವೂ ಆಗಿದೆ. ಕಾಂಡದಿಂದ ಕ್ಯಾಲಮಸ್ ಎಂಬ ಸುಗಂಧ ತೈಲವನ್ನು ತಯಾರಿಸುತ್ತಾರೆ. ಇದರಲ್ಲಿ ಅಸರೋನ್ ಸೆಸ್ಕ್ವಿಟರ್ಪೆಂಟೈನ್, ಸೆಸ್ಕ್ವೆಟರ್ಪೆಂಟೈನ್ ಆಲ್ಕೊಹಾಲ್ ಅಂಶಗಳಿವೆ. ಬೇರಿನಲ್ಲಿ ಅಕೋರಿನ್ ಇದೆ. ಮಾರುಕಟ್ಟೆಯಲ್ಲಿ ದೊರೆಯುವ ಒಣಗಿಸಿದ ಕಾಂಡ ಅನೇಕ ಜಾಡ್ಯಗಳಿಗೆ ಔಷಧವಾಗಿ ಉಪಯುಕ್ತ-ವಾತಹರವಾಗಿ, ವಾಂತಿಕಾರಕವಾಗಿ, ಸೆಡೆತ ನಿವಾರಕವಾಗಿ, ದೀರ್ಘಕಾಲದ ಭೇಧಿ ಉಪಶಮನಕವಾಗಿ, ಬಾಯಿವಾಸನೆ ಹಾಗೂ ಗಂಟಲಿನ ಸಂಸರ್ಗ ದೋಷಗಳ ನಿವಾರಕವಾಗಿ, ವಿಷಜಂತು ಕಡಿತದ ವಿರುದ್ಧವಾಗಿ ಇತ್ಯಾದಿ. ಬಜೆಯನ್ನು ಬೆಳ್ಳುಳ್ಳಿ, ಜೀರಿಗೆ ಉಪ್ಪು, ಸಕ್ಕರೆಯೊಂದಿಗೆ ಬೆರೆಸಿ ತಯಾರಿಸಿದ ಅರಾಟಾ ಎಂಬುದು ಕುದುರೆಗಳ ಬಲಸಂವರ್ಧನೆಗೆ ಅತ್ಯುತ್ತಮ. ಎಲೆಗಳಿಂದ ತಯಾರಿಸಿದ ತೈಲ ದನಕರುಗಳ ಕಾಲು ಬಾಯಿ ಹುಣ್ಣು ರೋಗಕ್ಕೆ ದಿವ್ಯೌಷಧ. ಜರತಾರಿ ಬಟ್ಟೆಗಳೊಂದಿಗೆ ಕಾಂಡಬೇರುಗಳನ್ನು ಇಡುವುದರಿಂದ ಬಟ್ಟೆಗಳನ್ನು ಹುಳುಗಳಿಂದ ಸಂರಕ್ಷಿಸಬಹುದು. ಅಲ್ಲದೆ ಹಾತೆ, ಹೇನು ತಿಗಣಿಗಳ ವಿರುದ್ಧ ಕೀಟನಾಶಕಗಳಾಗಿಯೂ ಇವನ್ನು ಉಪಯೋಗಿಸಬಹುದು.

	ಬಜೆಯನ್ನು ವರ್ಷದ ಎಲ್ಲ ಕಾಲಗಳಲ್ಲಿಯೂ ಬೆಳೆಯಬಹುದು. ಗೋಡು ಇಲ್ಲವೆ ಮೆಕ್ಕಲು ಮಣ್ಣು ಇದರ ಬೇಸಾಯಕ್ಕೆ ಉತ್ತಮ. ಬಿತ್ತದ ಗದ್ದೆಗಳಂತೆ ಬದುಗಳನ್ನು ಮಾಡಿ ಗದ್ದೆಯಲ್ಲಿ ಸದಾಕಾಲ ನೀರು ನಿಲ್ಲುವಂತೆ ಮಾಡಿ, ಬಜೆಯ ಕಾಂಡದ ತುದಿಗಳನ್ನು ಕತ್ತರಿಸಿ ನೆಡುವುದು ರೂಢಿ. ಈ ತುದಿಗಳಿಗೆ ಮೊಳಕೆಗಳೆಂದೇ ಹೆಸರು. ಇವನ್ನು ನೆಟ್ಟ 10-11 ತಿಂಗಳುಗಳ ತರುವಾಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುವು. ಆಗ ಬಜೆ ಕುಯ್ಲಿಗೆ ಸಿದ್ಧವಾಗಿದೆಯೆಂದು ಅರ್ಥ. ಭೂಮಿಯ ಒಳಗೆ ಸುಮಾರು 1 ಮೀಟರು ಆಳದಲ್ಲಿರುವ ಕಾಂಡಗಳನ್ನು ಹೊರತೆಗೆದು, ತುದಿಗಳನ್ನು (ಮೊಳಕೆಗಳು) ತೆಗೆದು ಬೇರೆ ಇರಿಸಿ, ಉಳಿದ ಭಾಗಗಳನ್ನು 5-6 ದಿನಗಳ ಕಾಲ ಒಣಗಿಸಲಾಗುತ್ತದೆ. ಅನಂತರ ಕೋಲಿನಿಂದ ಬಡಿದು, ಸುದ್ದೆ ಮಣ್ಣು ಅಥವಾ ಗೋಣಿ ಚೀಲದಲ್ಲಿ ಚೆನ್ನಾಗಿ ಉಜ್ಜಿ ಮೇಲಿನ ಸಿಪ್ಪೆ, ನಾರು ಮುಂತಾದವನ್ನು ಬೇರ್ಪಡಿಸಲಾಗುತ್ತದೆ. ಕಾಂಡಗಳನ್ನು ಸುಮಾರು 5 ಸೆಂಮೀ ಉದ್ದಕ್ಕೆ ಕತ್ತರಿಸಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಚೆನ್ನಾಗಿ ಕೃಷಿ ಮಾಡಿದಲ್ಲಿ ಹೆಕ್ಟೇರಿಗೆ 9-10 ಟನ್ ಬಜೆ ಪಡೆಯಬಹುದು.
(ಎ.ಕೆ.ಕೆ.; ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ